ಕನ್ನಡ ಕಂಗ್ಲಿಷ್ (Kanglish) ಆಗುತ್ತಿದೆಯೇ?

ಇದು ನಾನು ಬರೆದದ್ದಲ್ಲ. ಆದರೆ ಬಹಳ ಸತ್ಯದ ಮಾತೆಂದೆನಿಸಿತು.
WhatsAppನಲ್ಲಿ ಕಳುಹಿಸಿದ್ದವರು ಒಬ್ಬರು ಆಪ್ತರು.
"ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಬಹುದೇ?" ಎಂದು ಕೇಳಿದೆ. ಕೃತಿಚೌರ್ಯವೆನಿಸದಿರಲೆಂದು ತಮ್ಮ ಹೆಸರು ಪ್ರಕಟಿಸುತ್ತೇನೆ ಎಂದೆ.
ಪ್ರಕಟಿಸಿ ಆದರೆ ನನ್ನ ಹೆಸರು ಬೇಡ ಎಂದರು. ಅವರ ಕಾವ್ಯನಾಮವನ್ನು ಗೌಪ್ಯವಾಗಿಡಲು ಪ್ರಯತ್ನಿಸಿ, ಸ್ವಲ್ಪ ಮಟ್ಟಿಗಿ ಪರಿಶ್ಕರಿಸಿ ಈ ಬ್ಲಾಗನ್ನು ಪ್ರಕಟಿಸುತ್ತಿದ್ದೇನೆ.

ಇಲ್ಲಿ ತಿಳಿಸಿರುವ ಅನೇಕ ಅಪರಾಧಗಳನ್ನು ನಾನು ಮಾಡಿರುವೆ / ಮಾಡುತ್ತಿರುವೆ. ತಿದ್ದಿಕೊಳ್ಳುವ ಪ್ರಯತ್ನಗಳೂ ಇವೆ. 

🌀💫🌀💫🌀💫🌀💫🌀

ನಮ್ಮ ಮನೆಗಳಲ್ಲಿ ಶುದ್ಧ ಹಾಗೂ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವುದನ್ನೇ ನಿಲ್ಲಿಸಿ ಬಿಟ್ಟೆವಾ? 

ನಾವು ನಮ್ಮ ಮನೆಗಳಲ್ಲಿ ದಿನವಹಿ ನಡೆಸುವ ಸಂಭಾಷಣೆಗಳನ್ನು ಅವಲೋಕಿಸಿದರೆ, ನಾವು ಶುದ್ಧ ಕನ್ನಡದಲ್ಲಿ ಮಾತನಾಡುತ್ತಿಲ್ಲ ಎಂದು ಭಾಸವಾಗುತ್ತದೆ.
ನಾನು ಈ ಕೆಳಗೆ ಉಲ್ಲೇಖಿಸಿದ ಕೆಲವೇ ಕೆಲವು ನಮ್ಮ ಸಂಭಾಷಣೆಗಳ ತುಣುಕಗಳನ್ನು ಅವಲೋಕಿಸೋಣ.

ಡೋರ್ ಲಾಕ್ ಮಾಡಿಕೊಳ್ಳಿ, ನಾನು ಹೋಗಿ ಬರ್ತೀನಿ.
ಡೋರ್ ಲಾಕ್ ಮಾಡಿಕೊ. ನನ್ನ ಕೀಸ್ ಎಲ್ಲಿ?
ಇಲ್ಲಿ ಡೋರ್ ಲಾಕ್, ಕೀಸ್ ಪದಗಳಿಗೆ ಬದಲಾಗಿ ಅಚ್ಚು ಕನ್ನಡ ಪದ ಬಳಸಬಹುದಲ್ಲವೇ...
ಇಲ್ಲ ನಾವು ಬಳಸುವುದಿಲ್ಲ. ಕಾರಣ?
ಒಂದು ಇಪ್ಪತ್ತು, ಇಪ್ಪತ್ತೈದು ವರ್ಷಗಳ ಹಿಂದೆ ಬಾಗಿಲು ಹಾಕ್ಕೊಳ್ಳಿ, ಕದದ ಹಾಕ್ಕೊಳ್ಳಿ, ಬೀಗ ಹಾಕಿ, ಚಿಲಕ ಹಾಕಿ ಎನ್ನುತ್ತಿದ್ದೆವು.

ನಮ್ಮ ಚಿಕ್ಕಂದಿನ ಕನ್ನಡ ಮಾತುಗಳನ್ನು ಕ್ರಮೇಣ ಮರೆಯುತ್ತಿದ್ದೇವೆ.
ನಮ್ಮ ಮನೆಗಳಲ್ಲಿ ಇದುವರೆಗೂ ಬಳಸುತ್ತಿದ್ದ ಕನ್ನಡ ಪದಗಳನ್ನು ನಮ್ಮ ಮಕ್ಕಳಿಗೆ ರೂಢಿ ಮಾಡಿಸುವುದನ್ನು ಬಿಟ್ಟು ನಾವೇ ಇತರ ಭಾಷೆಯ ಪದಗಳನ್ನು ನಮ್ಮ ಕನ್ನಡದಲ್ಲಿ ಬೆರೆಸುತ್ತಿದ್ದೇವೆ.
ನಾವು ಹೀಗೆಕೆ ಬದಲಾದೆವು? 

ನಮ್ಮ ಕನ್ನಡದಲ್ಲಿ ಪದಗಳ ಕೊರತೆಯೇ? ಹಾಗೇನಿಲ್ಲ, ಕನ್ನಡದ ಪದಕೋಶ ಸಂಪದ್ಭರಿತವಾಗಿದೆ. ಅದರೂ ನಾವು ಪ್ರಯೋಗಿಸುವುದಿಲ್ಲ. ಅಷ್ಟೇ!

ಅಡುಗೆ ಮನೆ ಕಿಚನ್ ಆಗಿದೆ. ಬಚ್ಚಲು ಮನೆ ಬಾತ್ರೂಂ / ವಾಷ್ ರೂಮ್ / ರೆಸ್ಟ್ ರೂಮ್ ಆಗಿದೆ.
ಬಹುತೇಕ ನಾವು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಂತೂ ಚಾವಡಿ, ಹಜಾರ, ನಡುಮನೆ, ತಳಬಾಗಿಲು, ಹಿತ್ತಲು, ಕೊಟ್ಟಿಗೆ ಇವುಗಳನ್ನು ಅನಿವಾರ್ಯವಾಗಿ ಮರೆತೇ ಬಿಟ್ಟಿದ್ದೇವೆ.
ನಮ್ಮ ಮನೆಗಳಿಗೆ ಬಂಧುಬಾಂಧವರು, ನೆಂಟರಿಷ್ಟರು ಬರುವುದೇ ಇಲ್ಲ, ಬರುವವರೆಲ್ಲಾ ಗೆಸ್ಟ್‌ಗಳೇ ಆಗಿರುತ್ತಾರೆ.
ಆ ಬಂದವರು ನಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ, ತಿಂಡಿ ತಿನ್ನುವುದಿಲ್ಲ, ಬದಲಾಗಿ ಲಂಚೋ, ಡಿನ್ನರೋ, ಬ್ರೇಕ್‌ಫಾಸ್ಟೋ ಮಾಡುತ್ತಾರೆ.
ಉಟಕ್ಕೆ ಕುಳಿತಾಗ ತಟ್ಟೆ, ಬಾಳೆ ಎಲೆಗಳ ಜಾಗವನ್ನು ಪ್ಲೇಟ್‌ಗಳು ತುಂಬಿವೆ. ಅವುಗಳಲ್ಲಿ ಬಡಿಸುವ ಪದಾರ್ಥಗಳೆಲ್ಲಾ ರೈಸ್, ಕರ್ರಿ, ಗ್ರೇವಿ, ಫ್ರೈ ಮುಂತಾದುವು.
ಅನ್ನ, ಪಲ್ಯ, ಚಟ್ನಿ, ಹುಳಿ, ಸಾರು ತಿನ್ನಿ ಅಂದರೆ ಉಂಟೇ... ಬಂದವರು ಏನು ತಿಳಿದುಕೊಂಡಾರೆ ಎಂಬ ಭಯ!

ಅಂಗಡಿಗೆ ಹೋಗುವಾಗ ಚೀಲ ತೆಗೆದುಕೊಂಡು ಹೋಗುವುದಿಲ್ಲ. ಬ್ಯಾಗ್ ತೆಗೆದುಕೊಂಡು ಷಾಪ್‌ಗೆ ಹೋಗ್ತೀವಿ. ಅವುಗಳಲ್ಲಿ ಗ್ರೋಸರಿ, ವೆಜಿಟಬಲ್ಸ್, ಫ್ರೂಟ್ಸ್ ಹಾಕಿಕೊಂಡು ಬರುತ್ತೇವೆ. ಏಕೆಂದರೆ ತರಕಾರಿ, ಹಣ್ಣು ಎಂಬ ಪದಗಳು ಕೊಳೆತು ನಾರುತ್ತಿವೆ... ಅಲ್ಲವೇ?


"ಏನ್ರೀ ನಿಮ್ಮ ಮೊಮ್ಮಗಳ ಹೆರಿಗೆ ಆಯ್ತಾ?" ಎಂದು ನಮ್ಮ ಪಕ್ಕದ ಮನೆಯ ಅಜ್ಜಿಯನ್ನು ವಿಚಾರಿಸಿದಾಗ, ಅವರು ಹೇಳಿದ್ದು "ಏನಮ್ಮಾ ನೀನು ಡೆಲಿವರಿ ಆಯ್ತಾ ಎಂದು ಕೇಳುವುದನ್ನು ಬಿಟ್ಟು,ಅಡುಗೋಲು ಅಜ್ಜಿಯ ತರ ಹೆರಿಗೆ ಪರಿಗೆ ಅಂತೀಯಲ್ಲಾ?" ಎಂದು ನನ್ನನ್ನೇ ಮರುಪ್ರಶ್ನೆ ಮಾಡಿ ದಂಗಾಯಿಸಿದರು.

ಇನ್ನು ದೂರದರ್ಶನದ ಅಡುಗೆ ಕಾರ್ಯಕ್ರಮಗಳು. ಒಬ್ಬ ಮಹಿಳೆ ಅಡುಗೆಮಾಡುವ ವಿಧಾನವನ್ನು ನಮಗೆ ತಿಳಿಸುತ್ತಾಳೆ. ಅದು ಯಾವ ಭಾಷೆಯೋ ನೀವೇ ನಿರ್ಧರಿಸಿ. "ಸ್ವಲ್ಪ ಸಾಲ್ಟ್, ಮಿರ್ಚೀ ಪೌಡರ್, ಧನಿಯಾ ಪೌಡರ್, ಜಿಞ್ಜರ್, ಗಾರ್ಲಿಕ್ ಪೇಸ್ಟ್ ಆಡ್ ಮಾಡಿ ಫೈವ್ ಮಿನಿಟ್ಸ್ ಕುಕ್ ಮಾಡಬೇಕು. ಸ್ಟೋವ್ ಆಫ್ ಮಾಡಿ ಮಸಾಲಾ ಪೌಡರ್ ಚೆನ್ನಾಗಿ ಮಿಕ್ಸ್ ಮಾಡಬೇಕು...
ಹೀಗೆ ಮುಂದುವರೆಯುತ್ತದೆ. ಹೀಗಿರುವಾಗ ನಮ್ಮ ತಿಂಡುಸುಗಳಿಗೆ ಶುಂಠಿ, ಬೆಳ್ಳುಳ್ಳಿ, ಉಪ್ಪು, ಖಾರ, ಹುಳಿಯ ರುಚಿ ಎಲ್ಲಿಂದ ಬರಬೇಕು?

ನಿನ್ನೆ ನಮ್ಮ ಪಕ್ಕದ ಮನೆಯವರು ಬಂದು,
"ಸಾರ್ ನಾಳೆ ನಮ್ಮ ನೇಟಿವ್ ಪ್ಲೇಸ್‌ನಲ್ಲಿ ನಮ್ಮ ಸಿಸ್ಟರ್ ಸನ್ದ್ದು ಅಂದರೆ ನೆಫ್ಯುದು ಮ್ಯಾರೇಜ್ ಇದೆ, ಹೋಗಿ ಬರುತ್ತೇವೆ, ಸ್ವಲ್ಪ ಮನೆಕಡೆ ನಿಗಾ ಇಟ್ಟಿರಿ" ಎಂದರು. ಸೋದರ ಅಳಿಯ ಎನ್ನುವುದರಲ್ಲಿ ಎಷ್ಟು ಆಪ್ಯಾಯಿತನ ಗೋಚರಿಸುತ್ತದೆ. ನಾವೇಕೆ ಇಂತಹ ಆಪ್ಯಾಯಿತನವಾದ ಪದಗಳನ್ನು ಬಳಸುವುದರಲ್ಲಿ ಸಂಕೋಚ ಪಡುತ್ತೇವೆ?

ಅಮ್ಮ, ಅಪ್ಪ ಎಂದು ಕರೆಯುವುದು ವಿರಳವಾಗಿದೆ. ಅದರ ಬದಲು ಡ್ಯಾಡ್, ಮಾಮ್ಗಳು ನಮ್ಮ ಸಂಭಾಷಣೆಗಳಲ್ಲಿ ಹುದುಗಿ ಹೋಗಿವೆ. ಅತ್ತೆ, ಮಾಮ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪಾ ಎಲ್ಲರೂ ಮಾಯವಾಗಿ ಅಂಕಲ್, ಆಂಟಿ ಆಗಿದ್ದಾರೆ.
ಹಾಗೆಯೇ... ಅಕ್ಕ, ಅಣ್ಣ, ಬಾವ, ಅತ್ತಿಗೆ, ಬಾಮೈದ ಮುಂತಾದವರು ದೂರವಾಗಿ ಎಲ್ಲರೂ ಸಿಸ್ಟರ್, ಬ್ರದರ್, ಕಜಿನ್ಸ್, ಬ್ರದರ್ ಇನ್ ಲಾ ಆಗಿದ್ದಾರೆ.

ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ, ಸ್ಕೂಲ್‌ಗೆ ಕಳುಹಿಸುತ್ತಿದ್ದೇವೆ. ಹೌದು ಶಾಲೆಗೆ ಹೋಗಬೇಕು, ಅಲ್ಲಿಯೇ ಇಂಗ್ಲಿಷ್ ಕಲಿಯಬೇಕು. ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಅನಿವಾರ್ಯ. ಆದರೆ ಮನೆಯಲ್ಲಿ, ನೆರಹೊರೆಯವರ ಹತ್ತಿರ ಕನ್ನಡದಲ್ಲಿ ಮಾತನಾಡಲು ನಾವು ಏಕೆ ಬಿಡುತ್ತಿದ್ದೀವಿ? ನಾವು ನಮ್ಮ ತನದಿಂದ ಏಕೆ ವಿಮುಖರಾಗುತ್ತಿದ್ದೇವೆ?

ಹೆಚ್ಚು ಹೆಚ್ಚು ಆಂಗ್ಲ ಪದಗಳನ್ನು ಬಳಸಿದರೆ ಸಮಾಜದಲ್ಲಿ ನಮ್ಮ ಗೌರವ ಹೆಚ್ಚುವುದು ಎಂಬ ಭ್ರಮೆಯೇ? ಕನ್ನಡದ ಪದಗಳು ಒರಟು ಎಂಬ ಅಪನಂಬಿಕೆಯೇ?
ಇದು ಖಂಡಿತ ಪರಭಾಷಾ ವ್ಯಾಮೋಹ ಮಾತ್ರವೇ ಅಲ್ಲ, ನನಗೂ ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ನಾನೇನೂ ಯಾರಿಗೂ ಕಡಿಮೆ ಅಲ್ಲ ಎಂಬ ಸ್ವಯಂಕೃತ ಮಾನಸಿಕ ದೌರ್ಬಲ್ಯವೇ ಸರಿ.
ಇಂತಹ ಆಲೋಚನೆಗಳಿಂದ ನಮ್ಮ ಕಸ್ತೂರಿ ಕನ್ನಡದ ಬಳಕೆಯಲ್ಲಿ ಹಿಂಜರಿಕೆಯಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಇಂದಿನ ಕಾಲಮಾನದಲ್ಲಿ ಹಳ್ಳಿಗಳೂ, ಪಟ್ಟಣಗಳೂ ಎಂಬ ತಾರತಮ್ಯವಿಲ್ಲದೆ ಆಂಗ್ಲ ಪದಗಳ ಬಳಕೆ ಅಭ್ಯಾಸವಾಗಿ ಹೋಗಿದೆ. ಹಾಗೆಂದರೂ ದಿನಬಳಕೆಯ ಪದಗಳನ್ನು ಬಿಟ್ಟು ಪರಭಾಷಾ ಪದಬಳಕೆಯಿಂದ ನಮ್ಮ ಭಾಷೆ ಕ್ಷೀಣಿಸುತ್ತಿದೆ.

ಮನೆ ಹೊರಗಡೆ ಇತರ ಭಾಷೆಯ ಪದಬಳಕೆ ಸರಿ ಎನಿಸಿದರೂ, ನಮ್ಮ ನಾಲ್ಕು ಗೋಡೆಗಳ ಮಧ್ಯೆ ನಮ್ಮ ಭಾಷೆ, ನಮ್ಮತನ, ನಮ್ಮ ಆಚಾರ ವಿಚಾರಗಳನ್ನು ಮುಂದುವರಿಸಲು ಯಾವ ಸಂಕೋಚವೂ ಇರುವುದಿಲ್ಲ.
ಇನ್ನು ಮೇಲಾದರೂ ಓ ನನ್ನ ಕನ್ನಡ ನೆಲದ ನೆಚ್ಚಿನ ಗೆಳೆಯರೇ, ಬಾಂಧವರೇ... ಅವಶ್ಯಕತೆ ಇಲ್ಲದ ಆಂಗ್ಲ ಪದಗಳಿಗೆ ಕದ ಮುಚ್ಚಿ.
ನಮ್ಮ ಸವಿಗನ್ನಡ ಪದಗಳ ಯಥೇಚ್ಛ ಬಳಕೆಗೆ ನಮ್ಮ ಕನ್ನಡದ ಮನ ಹಾಗು ಮನೆಯ ಬಾಗಿಲನ್ನು ಸದಾ ತೆರೆದಿಡೋಣ.

ಎಲ್ಲಾದರು ಇರು,

ಎಂತಾದರು ಇರು, 
ಎಂದೆಂದೂ
ನೀ ಕನ್ನಡಿಗನಾಗಿರು

*ಜಾ*ಕೀ ತ*ಯ*

🌀💫🌀💫🌀💫🌀💫🌀

ಕೊನೆಯ ಮಾತು…
ಕನ್ನಡ ಆಡು ಹಾಗು ನಾಡು ಭಾಷೆಯಾಗಿ ಉಳಿಯ ಬೇಕಾದರೆ, ಅದರ ದಿನನಿತ್ಯದ ಹಾಗು ಸಾಮಾನ್ಯ ಬಳಕೆ ಅತ್ಯಗತ್ಯ. 
ಭಾಷೆ ಒಂದು ಪ್ರಾಂತ್ಯದ, ಜನಾಂಗದ ಕುರುಹು ಮತ್ತು ಅಸ್ತಿತ್ವ. ಅದರಿಂದ ಹೊರ ಹೊಮ್ಮುವವು ಜಾನಪದ, ಸಾಹಿತ್ಯ ಹಾಗು ಕಲೆ. 
ಅದೊಂದು ಸಾಹಿತ್ಯ ಮಟ್ಟದಿಂದ ದಾಟಿ ಲೋಕಾಭಿರುಡಿಯಾಗಿರಬೇಕು  ಹಾಗು ದಿನನಿತ್ಯದ ಬಳಕೆಯಲ್ಲಿರಬೇಕು. 
ಅದರ ಪದ ಕೋಶ ಹೆಚ್ಚುತ್ತಿರಬೇಕು. ಅದಕ್ಕೆ ಹೊರ ಭಾಷೆಯ ಪ್ರವೇಶವಿಲ್ಲವೆಂದಲ್ಲ. 
ಆದರೆ ಆ ಪರ ಭಾಷೆ ಪ್ರವಾಹವಾಗಿ ತಾಯ್ಭಾಷೆಯನ್ನು ಕೊಚ್ಚಿ ತಳ್ಳಬಾರದಂತೆ ಬದಿ ಕಟ್ಟುಗಳು ನಾವಾಗಿರಬೇಕು. 
ಕನ್ನಡದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಲ್ಲವೇ?
ನಿಮ್ಮ ಅನಿಸಿಕೆ ಏನು?
- ನಾ ಶ್ರೀ ಮೋ

Comments

  1. Doreswamy Srinidhi24 February 2026 at 11:18

    Mainly due to English medium, esp in high school! Also many of us moved out of Karnataka.

    ReplyDelete
    Replies
    1. Hmmm.. how do we then explain a Tamilian, a Telugu, a Korean or a Japanese way of handling their language? We Kannadigas have a problem?

      Delete
  2. Kannadigas are adaptive, accommodative, show off type with no loyalty to mother tongue. Many languages have died in the world. Kannada has survived and will for many centuries. If only awareness increases, it may flourish also! Take a look at the Hindi language! It has become a world language!
    ಇಂಗ್ಲಿಷಿನ ಗೀಳು ಆಗಬಾರದು ಕನ್ನಡದ ಅಳಿಲು!

    ReplyDelete
    Replies
    1. Master ಹಿರಣ್ಣಯ್ಯನವರ ಮಾತು ಜ್ಞಾಪಕಕ್ಕೆ ಬಂತು @ರಮೇಶವರೆ… “ಸಾಧಾರಣವಾಗಿ ತೆಮಿಳರು ದುರಭಿಮಾನಿಗಳು (ತೆಮಿಳೇ ಶ್ರೇಷ್ಟ), ತೆಲಗರು ಅಭಿಮಾನಿಗಳು (ಬೇರೆಯವರನ್ನು ತೆಗೆಳುವುದಿಲ್ಲ, ತಮ್ಮ ಃಾಷೆ ಬಿಡುವುದಿಲ್ಲ), ಕನ್ನಡಿಗರು ನಿರಭಿಮಾನಿಗಳು (ವಿವರಣೆ ಬೇಕಾಗಿಲ್ಲ)!

      Delete
  3. ಈಗಲಾದರೂ ನಾವು ಸಾಮೂಹಿಕವಾಗಿ ಜವಾಬ್ದಾರಿಯನ್ನು ಹೊರಬೇಕು, ಈಗ ನಮ್ಮ ಮುಂದಿರುವ ಗುರಿ..ಕನ್ನಡವನ್ನು ಬೆಳೆಸಬೇಕು ಅದಕ್ಕೆ ಮುಂಚೆ ಕನ್ನಡವನ್ನು ಉಳಿಸಬೇಕು, ಅದಕ್ಕೆ ನಾವೆಲ್ಲ ಪ್ರತಿದಿನ ಕನ್ನಡವನ್ನು ಬಳಸಬೇಕು.

    ReplyDelete
    Replies
    1. ಬಳಸಿ, ಉಳಿಸಿ, ಬೆಳೆಸೋಣ

      Delete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

Bike ride in Thailand

Deepavali Reflections: King Bali and the Spirit of Righteousness

A trip down the memory lane

Sixty - retired?

Being bald

REML Himalayan Bike

My first long Motorbike ride